ಬ್ಯಾಂಗ್‍ಕಾಕ್
	ಥೈಲೆಂಡಿನ ರಾಜಧಾನಿ, ಮುಖ್ಯ ಬಂದರು ಮತ್ತು ವಾಣಿಜ್ಯ ಸಾಂಸ್ಕøತಿಕ ಕೇಂದ್ರನಗರ. ಜನಸಂಖ್ಯೆ 4,870,509 (1978).

	ಬ್ಯಾಂಗ್‍ಕಾಕ್ ನಗರ ಥೈಲೆಂಡ್ ಕೊಲ್ಲಿಗೆ ಸೇರುವ ಜಾವ್ ಫ್ರೈಯ ನದಿದಂಡೆಯ ಮೇಲೆ ಸಮುದ್ರಕ್ಕೆ ಸುಮಾರು 40 ಕಿಮೀ ದೂರದಲ್ಲಿದೆ. ಇದರ ನೆಲೆ ಉತ್ತರ ಅಕ್ಷಾಂಶ 30(45( ಪೂರ್ವ ರೇಖಾಂಶ 100(31( ನದೀ ಕವಲುಗಳು ಮತ್ತು ಕಾಲುವೆಗಳಿಂದ ಆವೃತವಾಗಿರುವ ಈ ನಗರಕ್ಕೆ ಮೂರು ಮುಖ್ಯ ಸೇತುವೆಗಳ ಮೂಲಕ ಇದರ ವಿವಿಧ ಭಾಗಗಳೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದಲೇ ಈ ನಗರವನ್ನು ಪೂರ್ವದ ವೆನಿಸ್ ಎಂದು ಕರೆಯುವುದುಂಟು. ಬ್ಯಾಂಗ್‍ಕಾಕ್ ಆಧುನಿಕವಾಗಿ ಯೋಚಿಸಿ ನಿರ್ಮಿಸಿದ ನಗರವಲ್ಲ. ಅದು ಹದಿನೆಂಟನೆಯ ಶತಮಾನದ ಉತ್ತರಾರ್ಧದಿಂದ ಕ್ರಮೇಣ ಬೆಳೆದ ನಗರ. ವಿಸ್ತೀರ್ಣ 290 ಚಕಿಮೀ (1971). 1960ರಿಂದ 1970ರ ನಡುವೆ ಒಂದುದಶಕದಲ್ಲಿ ಇಲ್ಲಿಯ ಜನಸಂಖ್ಯೆ ಎರಡುಪಟ್ಟು ಹೆಚ್ಚಿತು. ನಗರದ ಕೇಂದ್ರಭಾಗ ಕಿರಿದಾದ ರಸ್ತೆಗಳಿಂದ ಮತ್ತು ಜನಜಂಗುಳಿಯಿಂದ ಕೂಡಿದೆ. ದೇಶದ ಪ್ರಮುಖ ರೈಲ್ವೆ ನಿಲ್ದಾಣ ಇಲ್ಲಿದೆ. ಬ್ಯಾಂಗ್‍ಕಾಕ್ ಇಂದು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರ. ಜಾವ್ ಫ್ರೈ ಪ್ರದೇಶದಲ್ಲಿ ಬಂದರಿದೆ. ಥೈಲೆಂಡಿನ ನೌಕಾ ಸಾರಿಗೆ ಮತ್ತು ಸಾಗಣೆಯ ಬಹುಭಾಗ ಈ ಬಂದರಿನ ಮೂಲಕ ನಡೆಯುತ್ತದೆ. ಇಲ್ಲಿಯ ನಗರ ಜಲಸಾರಿಗೆಯೂ ಮಹತ್ತ್ವದ್ದು. ಆಹಾರ ಸಂಸ್ಕರಣೆ, ಉಡುಪುಗಳು ಮತ್ತು ಮನೆನಿರ್ಮಾಣಕ್ಕೆ ಅಗತ್ಯವಾದ ಸಾಮಗ್ರಿಗಳಿಗೆ ಸಂಬಂಧಿಸಿದ ಕಾರ್ಖಾನೆಗಳಿವೆ.

	ಇತಿಹಾಸ: ಬ್ಯಾಂಗ್‍ಕಾಕ್ 1769ರ ಮೊದಲು ಒಂದು ಸಾಮಾನ್ಯ ಹಳ್ಳಿ. ಅದನ್ನು ಕ್ರುನ್‍ಥೆಪ್ (ದೇವತೆಗಳ ಊರು) ಎಂದು ಕರೆಯುತ್ತಿದ್ದರು. 1782ರಲ್ಲಿ ಅದು ಸೈಯಾಮಿನ ರಾಜಧಾನಿಯಾಯಿತು. ಈಗಲೂ ಬಹುತೇಕ ಥಾಯಿಗಳು ಕ್ರುನ್‍ಥೆಪ್ ಎಂದೇ ಕರೆಯುತ್ತಾರೆ. ಬ್ಯಾಂಗ್‍ಕಾಕ್ ಎಂದರೆ ಕಾಡು ಪ್ಲಮ್ ಹಣ್ಣುಗಳಿರುವ ಊರು ಅಥವಾ ಪ್ರದೇಶವೆಂಬ ಅರ್ಥವಿದೆ. ಹಿಂದೆ ಇದು ರಾಜವಂಶಸ್ಥರ ಆಡಳಿತ ಕೇಂದ್ರವಾಗಿತ್ತು. ಈಗಲೂ ಈ ನಗರ ಸ್ವಲ್ಪಮಾರ್ಪಾಟಿನೊಂದಿಗೆ ರಾಜಶಾಹಿಯ ಕೇಂದ್ರವಾಗಿದೆ. ನಗರ 1941ರಲ್ಲಿ ಜಪಾನೀಯರ ವಶವಾಗಿತ್ತು. ಇಲ್ಲಿಯ ಅರಮನೆ ಪ್ರಪಂಚ ವಿಖ್ಯಾತವಾಗಿದೆ. ಇಲ್ಲಿ 300ಕ್ಕೂ ಹೆಚ್ಚು ಬೌದ್ಧಮಠಗಳಿವೆ. ಅವು ಥೈಲೆಂಡಿನ ವಾಸ್ತು ಕಲೆಗಳಿಗೆ ಸಾಕ್ಷಿಯಾಗಿವೆ. ಅವುಗಳಲ್ಲಿ ವಾಟ್‍ಪೋ. ವಾಟ್‍ಫ್ರಾಕೆವೊ ಮತ್ತು ವಾಟ್ ಟ್ರಿಮಿಟ್ರ್‍ಗಳು ಮುಖ್ಯವಾದವು. ಕುಳ್ಳಗಿನ ಬೌದ್ಧಮಠ ಕಟ್ಟಡಗಳು. ಎತ್ತರದ ಪಗೋಡಗಳು ನಗರ ಸೌಂದರ್ಯವನ್ನು ಹೆಚ್ಚಿಸಿವೆ. ಆಗ್ನೇಯ ಏಷ್ಯಾ ಕೌಲು ಸಂಸ್ಥೆಯ (ಸಿಯಾಟೊ) ಕೇಂದ್ರ ಇಲ್ಲಿದೆ. ವಿಶ್ವಸಂಸ್ಥೆಯ ಕೆಲವು ಅಂಗಸಂಸ್ಥೆಗಳು ಮತ್ತಿತರ ಅಂತಾರಾಷ್ಟ್ರೀಯ ಸಂಸ್ಥೆಗಳೆ ಶಾಖೆಗಳ ಇಲ್ಲಿವೆ. ಅಂತಾರಾಷ್ಟ್ರೀಯ ವಿಮಾನನಿಲ್ದಾಣವಿದೆ. ನಗರ ಜನಸಂಖ್ಯೆಯಲ್ಲಿ ಶೇಕಡಾ ತೊಂಬತ್ತರಷ್ಟು ಥಾಯಿಗಳೂ ಒಂಬತ್ತರಷ್ಟು ಚೀನಿಯರೂ ಒಂದರಷ್ಟು ಇತರರೂ ಇದ್ದಾರೆ. 
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ